ಅಜಗರ 2 

 ಹೆಬ್ಬಾವು ಆಡನ್ನು ನುಂಗುವುದರಿಂದ ಹೆಸರು ಬಂದಿದೆ. ನಹುಷ ಚಕ್ರವರ್ತಿ ಬ್ರಹ್ಮನಿಂದ ಇಂದ್ರಪದವಿಗೆ ನಿಯುಕ್ತನಾಗಿದ್ದ ಕಾಲದಲ್ಲಿ ಶಚಿಯನ್ನು ಕಾಡಬೇಕೆಂಬ ದುರಭಿಲಾಷೆ ತಲೆದೋರಿ ಸಪ್ತರ್ಷಿಗಳನ್ನು ವಾಹನವಾಗಿ ಮಾಡಿಕೊಂಡು ಅವಳಲ್ಲಿಗೆ ಹೋಗುತ್ತಿರುವಾಗ 'ಸರ್ಪ' 'ಸರ್ಪ' ಎಂದು ಹೇಳುತ್ತ ಪಲ್ಲಕ್ಕಿಯನ್ನು ಹೊತ್ತಿದ್ದ ಅಗಸ್ತ್ಯನ ತಲೆಯ ಮೇಲೆ ಒದೆಯಲು ಕೋಪಗೊಂಡ ಅಗಸ್ತ್ಯ 'ಸರ್ಪೋಭವ' ಎಂದು ಶಾಪಕೊಟ್ಟ ಕೂಡಲೇ ನಹುಷ ಒಂದು ಅಜಗರವಾಗಿ ಬೀಳುತ್ತಾನೆ. ಒಮ್ಮೆ ಬೇಟೆಯಾಡಲು ಬಂದಿದ್ದ ಭೀಮಸೇನ ಅಜಗರಕ್ಕೆ ಸಿಕ್ಕಿಬಿದ್ದು ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಭೀಮನನ್ನು ಹುಡುಕಿಕೊಂಡು ಬಂದ ಧರ್ಮರಾಜನನ್ನು ಅಜಗರ ಕೆಲವು ಪ್ರಶ್ನೆಗಳನ್ನು ಕೇಳಲು ಅದಕ್ಕೆ ಧರ್ಮರಾಜ ಸಮರ್ಪಕವಾದ ಉತ್ತರವನ್ನು ಕೊಟ್ಟ ಬಳಿಕ ಸರ್ಪ ಭೀಮನನ್ನು ಬಿಟ್ಟುಕೊಟ್ಟಿತು. ಕೂಡಲೇ ಶಾಪವಿಮೋಚನೆಯಾಗಿ ನಹುಷ ಸರ್ಪದೇಹವನ್ನು ಬಿಟ್ಟು ಸ್ವರ್ಗಲೋಕಕ್ಕೆ ಹೋದ.

 

(ಎಸ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ